Job 7

1ಭೂಲೋಕದಲ್ಲಿ ಮನುಷ್ಯನಿಗೆ ದುಡಿಯುವ ಕಾಲ ಉಂಟಲ್ಲವೇ.
ಅವನ ದಿನಗಳು ಜೀತದಾಳಿನ ದಿನಗಳಂತೆ ಕಳೆಯುತ್ತವೆ.
2ನಾನು ಸಂಜೆಯನ್ನು ಬಯಸುವ ದಾಸನಂತೆಯೂ,
ಕೂಲಿಯನ್ನು ನಿರೀಕ್ಷಿಸುವ ಆಳಿನಂತೆಯೂ ಇದ್ದೇನೆ.
3ಬೇಸರಿಕೆಯ ಮಾಸಗಳೂ,
ಆಯಾಸದ ರಾತ್ರಿಗಳೂ ನನ್ನ ಪಾಲಿಗೆ ನೇಮಕವಾಗಿವೆ.

4ಮಲಗುವ ವೇಳೆಯಲ್ಲಿ ಯಾವಾಗ ಏಳುವೆನೋ ಅಂದುಕೊಳ್ಳುವೆನು;

ರಾತ್ರಿಯು ಬೆಳೆಯುತ್ತಾ ಹೋಗುತ್ತದೆ.
ಉದಯದವರೆಗೂ ಹೊರಹೊರಳಿ ಸಾಕಾಗುತ್ತದೆ.
5ಹುಳಗಳೂ, ಮಣ್ಣುಹಕ್ಕಳೆಗಳೂ ನನ್ನ ಮಾಂಸವನ್ನು ಮುಸುಕಿವೆ.
(ಬಿರಿದ) ಚರ್ಮವು ಕೂಡುತ್ತಾ ಬಂದು ಬಿರಿಯುತ್ತದೆ.

6ನನ್ನ ದಿನಗಳು ಮಗ್ಗದ ಲಾಳಿಗಿಂತ ವೇಗವಾಗಿ,

ನಿರೀಕ್ಷೆಯಿಲ್ಲದೆ ಕಳೆದು ಹೋಗುತ್ತವೆ.
7ನನ್ನ ಜೀವವು ಗಾಳಿಯಂತೆ ಇದೆಯೆಂತಲೂ,
ನನ್ನ ಕಣ್ಣು ಇನ್ನು ಸುಖವನ್ನು ಕಾಣುವುದಿಲ್ಲವೆಂತಲೂ ನೆನಪು ಮಾಡಿಕೋ.

8ನನ್ನನ್ನು ನೋಡುವವನ ಕಣ್ಣಿಗೆ ನಾನು ಕಾಣಿಸುವುದಿಲ್ಲ,

ನಿನ್ನ ಕಣ್ಣುಗಳು ನನ್ನ ಕಡೆ ಇದ್ದರೂ ನಾನು ಇರುವುದಿಲ್ಲ.
9ಮೋಡ ಹರಿದು ಮಾಯವಾಗುವಂತೆ,
ಪಾತಾಳಕ್ಕೆ ಇಳಿದು ಹೋದವನು ತಿರುಗಿ ಬರುವುದಿಲ್ಲ.
10ಅವನು ತನ್ನ ಮನೆಗೆ ಪುನಃ ಸೇರುವುದಿಲ್ಲ,
ಇನ್ನು ಮೇಲೆ ಅವನ ನಿವಾಸಕ್ಕೆ ಅವನ ಪರಿಚಯ ಇರುವುದಿಲ್ಲ.

11ನಾನಂತೂ ಬಾಯಿಮುಚ್ಚುವುದಿಲ್ಲ;

ಆತ್ಮವೇದನೆಯಿಂದ ಮಾತನಾಡುವೆನು,
ಮನೋವ್ಯಥೆಯಿಂದ ಪ್ರಲಾಪಿಸುವೆನು.
12ನೀನು ನನ್ನ ಮೇಲೆ ಕಾವಲಿಡುವುದೇಕೆ?
ನಾನೇನು ಸಮುದ್ರವೋ, ಸಾಗರವೆಂಬ ಘಟಸರ್ಪವೋ?

13ನನ್ನ ಹಾಸಿಗೆಯು ನನ್ನನ್ನು ಸಂತಯಿಸುವುದು,

ನನ್ನ ಮಂಚವು ನನ್ನ ಬಾಧೆಯನ್ನು ಹೊರುವುದು ಅಂದುಕೊಳ್ಳುವಾಗ
14ನೀನು ಸ್ವಪ್ನಗಳಿಂದ ನನ್ನನ್ನು ಬೆದರಿಸಿ,
ದರ್ಶನಗಳ ಮೂಲಕ ಭಯಪಡಿಸುವಿ.
15ನನ್ನ ಆತ್ಮವು ಈ ಅಸ್ಥಿಪಂಜರದಲ್ಲಿ ಉಳಿಯುವುದಕ್ಕಿಂತಲೂ,
ಉಸಿರುಕಟ್ಟಿ ಸಾಯುವುದೇ ಲೇಸೆಂದು ಬಯಸುತ್ತದೆ.

16ನಾನು ಬೇಸರಗೊಂಡಿದ್ದೇನೆ, ಹೀಗೆ ನಿರಂತರ ಬದುಕುವುದಕ್ಕೆ ಇಷ್ಟವಿಲ್ಲ.

ನನ್ನನ್ನು ಬಿಟ್ಟುಬಿಡು; ನನ್ನ ದಿನಗಳು ಉಸಿರಿನಂತಿವೆ.
17ಮಾನವನು ಎಷ್ಟರವನು, ಅವನನ್ನು ನೀನು ಏಕೆ ಲಕ್ಷಿಸಬೇಕು?
ಅವನಲ್ಲಿ ಏಕೆ ಮನಸ್ಸಿಡಬೇಕು?
18ದಿನಂಪ್ರತಿ ಅವನ ಮೇಲೆ ಲಕ್ಷ್ಯವಿಟ್ಟು,
ಕ್ಷಣಕ್ಷಣಕ್ಕೂ ಅವನನ್ನು ಪರಿಶೋಧಿಸುವುದೇಕೆ?

19ಇನ್ನೆಷ್ಟರವರೆಗೆ ನೀನು ನನ್ನ ಕಡೆಯಿಂದ ದೃಷ್ಟಿ ತಿರುಗಿಸದೆ ಇರುವಿ?

ಉಗುಳನ್ನು ನುಂಗುವಷ್ಟು ಕಾಲವಾದರೂ ನನ್ನನ್ನು ಬಿಡುವುದಿಲ್ಲವೇ?
20ಮನುಷ್ಯರ ಮೇಲೆ ಕಾವಲಿಡುವವನೇ,
ನಾನು ಪಾಪ ಮಾಡಿದ್ದರೂ ನನ್ನ ಕೃತ್ಯದಿಂದ ನಿನಗೆ ಏನಾಯಿತು?
ನನ್ನನ್ನು ಶಿಕ್ಷೆಗೆ ಗುರಿಮಾಡಿಕೊಂಡದ್ದೇಕೆ? ನನಗೆ ನಾನೇ ಭಾರವಾಗಿದ್ದೇನೆ.

ನೀನು ನನ್ನ ಅಪರಾಧವನ್ನು ಕ್ಷಮಿಸಿ ನನ್ನ ದೋಷವನ್ನು ಏಕೆ ಪರಿಹರಿಸುವುದಿಲ್ಲ?

ನಾನು ಈಗ ಮಣ್ಣಿನಲ್ಲಿ ಮಲಗಿಕೊಳ್ಳುವೆನು;
ನೀನು ನನ್ನನ್ನು ಹುಡುಕುವಾಗ ನಾನು ಇಲ್ಲದೆ ಹೋಗಿರುವೆನು.
21

Copyright information for KanULB